ಮೆಲನೇಷ್ಯ -
ಪೆಸಿಫಿಕ್ ದ್ವೀಪಸ್ತೋಮದಲ್ಲಿರುವ ಮೂರು ಮುಖ್ಯ ವಿಭಾಗಗಳ ಪೈಕಿ ಒಂದು.  ಉಳಿದೆರಡು ಮೈಕ್ರೊನೇಷ್ಯ ಹಾಗೂ ಪಾಲಿನೇಷ್ಯ. ಆಸ್ಟ್ರೇಲಿಯ ನ್ಯೂಗಿನಿಯ ಈಶ್ಯಾನದಲ್ಲಿದೆ.  ಮೆಲನೇಷ್ಯ ಎಂದರೆ ಕಪ್ಪು ದ್ವೀಪಗಳು ಎಂದರ್ಥ. ಈ ದ್ವೀಪಗಳ ಜನ ಹೆಚ್ಚು ಮಂದಿ ಕಪ್ಪು ಬಣ್ಣದವರಾಗಿರುವುದೇ ಇದಕ್ಕೆ ಈ ಹೆಸರು ಬರಲು ಕಾರಣ. ಪೆಸಿಫಿಕ್ ದ್ವೀಪಸ್ತೋಮದಲ್ಲಿ ಅತ್ಯಂತ ದೊಡ್ಡ ದ್ವೀಪಗಳಾದ ನ್ಯೂಗಿನಿ ಮತ್ತು ನ್ಯೂ ಬ್ರಿಟನ್‍ಗಳು ಮೆಲನೇಷ್ಯದಲ್ಲಿ ಸೇರಿವೆ. ಮೆಲನೇಷ್ಯದ ಒಟ್ಟು ಭೂಭಾಗ 5,40,000 ಚಕಿಮೀ. ಜನಸಂಖ್ಯೆ ಎಲ್ಲ ದ್ವೀಪಗಳು ಸೇರಿದಂತೆ 2,22,00,000(1998). 
	ಮೆಲನೇಷ್ಯದ ಕೆಲವು ಪ್ರಮುಖ ದ್ವೀಪಗಳ ವಿವರ ಇಂತಿದೆ:  

ದ್ವೀಪ
ಸ್ಥಾನಮಾನ
   ವಿಸ್ತೀರ್ಣ(ಚಕಿಮೀ)
ಜನ ಜನಸಂಖ್ಯೆ(ಅಂದಾಜು)

1
   ಪಶ್ಚಿಮ ನ್ಯೂಗಿನಿ (ಇರೀಯಾನ್ ಬಾರಾತ್ ಅಥವಾ ಪಶ್ಚಿಮ ಇರೀಯಾನ್)
ಇಂಡೋನೇಷ್ಯದ ಪ್ರಾಂತ್ಯ
4,21,923
1,313,000

2
ಫೀಜಿ
ಸ್ವತಂತ್ರ
18,376
8,09,000

3
ನ್ಯೂ ಕ್ಯಾಲಿಡೋನಿಯ
   ಫ್ರೆಂಚ್ ಸಾಗರೋತ್ತರ ಪ್ರದೇಶ
18,998
2,00,000(1998)

4
ಪಾಪ್ಯದ ನ್ಯೂಗಿನಿ
ಸ್ವತಂತ್ರ
4,62,840
45,00,000

5
ಸಾಲೊಮನ್ಸ್ ದ್ವೀಪಗಳು
ಸ್ವತಂತ್ರ
29,758
4,04,000(1997)

6
ವನುವಾಟು
ಸ್ವತಂತ್ರ
14,763
1,77,500

ಭೂಲಕ್ಷಣ : ಮೆಲನೇಷ್ಯ ದ್ವೀಪಗಳು ಅಗ್ನಿಪರ್ವತ ಮೂಲದಿಂದ ಉಂಟಾದವು.  ಇಲ್ಲಿ ಭೂಮಿ ರೂಪ ಪರಿವರ್ತನೆ ಹೊಂದಿದ ಸೆಡಿಮೆಂಟರಿ ಮಣ್ಣು ಹಾಗೂ ಅಂತಸ್ಸರಣದಿಂದ ಕೂಡಿದೆ.  ಎಲ್ಲ ದ್ವೀಪಗಳೂ ಗುಡ್ಡಗಾಡು ಪ್ರದೇಶದಿಂದ ಕೂಡಿವೆ.  ನ್ಯೂಗಿನಿ, ಫೀಜಿ ಮೊದಲಾದ ದೊಡ್ಡ ದ್ವೀಪಗಳಲ್ಲಿ ಇಕ್ಕಟ್ಟಾದ ಸಮುದ್ರತೀರ ಹಾಗೂ ಅಕ್ಕಪಕ್ಕದ ಭೂಮಿಯ ಅಭಿವೃದ್ಧಿಗೆ ಕಾರಣವಾದ ನದಿವ್ಯೂಹಗಳಿವೆ.   ಹವಳದ ದಿಬ್ಬಗಳಿಂದ ಕೂಡಿದ ಸಣ್ಣ ದ್ವೀಪಗಳಿವೆ.  ಮೇಲನೇಷ್ಯದ ಎಲ್ಲ ಭಾಗಗಳಲ್ಲಿಯೂ ಆಗಾಗ್ಗೆ ಭೂಕಂಪ ಮತ್ತು  ಅಗ್ನಿಪರ್ವತದ ವಿಸ್ಫೋಟವಾಗುತ್ತಿರುತ್ತದೆ.

	ಈ ದ್ವೀಪಗಳಲ್ಲಿ ಉಷ್ಣವಲಯದ ಹವೆಯಿದ್ದು ವರ್ಷವೆಲ್ಲ ಬೇಸಗೆಯ ವಾತಾವರಣವಿರುತ್ತದೆ.  ಆದರೆ ನ್ಯೂಗಿನಿಯ ಬೆಟ್ಟಪ್ರದೇಶದಲ್ಲಿ ತಂಪಾದ ಹವಾಗುಣವಿರುತ್ತದೆ.  ಇಲ್ಲಿಯ ಸರಸರಿ ಉಷ್ಣತೆ  250ಅ - 280 ಅ.  ಅವಪಾತ ಡಿಸೆಂಬರ್‍ನಿಂದ ಏಪ್ರಿಲ್‍ತನಕ ಸಾಂಧ್ರೀಕೃತವಾಗಿದ್ದು ಗಾಳಿ ಬೀಸುವ ಕಡೆಗಳಲ್ಲಿ ವಾರ್ಷಿಕ ಅವಪಾತದ ಪ್ರಮಾಣ 7000 - 9000 ಮಿಮೀ.  ಗಾಳಿಮರೆಯ ಕಡೆಯ ಭಾಗಗಳಲ್ಲಿ ಅದರ ಪ್ರಮಾಣ 1000-2000 ಮಿಮೀ.  ಮಳೆಯ ಪ್ರಮಾಣ ದ್ವೀಪದಿಂದ ದ್ವೀಪಕ್ಕೆ ಬದಲಾಗುತ್ತದೆ.  ಡಿಸೆಂಬರ್‍ನಿಂದ ಮಾರ್ಚ್ ತನಕ ಮಳೆಗಾಲ.  ಆಗಾಗ ಬಿಸುವ ಬಿರುಗಾಳಿಯಿಂದ ಆಸ್ತಿಪಾಸ್ತಿಗಳಿಗೆ ಹಾನಿಯುಂಟಾಗುವುದುಂಟು.

	ಮಲನೇಷ್ಯದ ಉತ್ತರಭಾಗದಲ್ಲಿ ದಟ್ಟವಾದ ಉಷ್ಣವಲಯದ ಕಾಡುಗಳಿವೆ.  ಈ ಕಾಡುಗಳಲ್ಲಿ ಬ್ರೆಡ್‍ಫ್ರೂಟ್, ರಬ್ಬರ್, ತಾಳೆ, ತೇಗ, ಮತ್ತು ಗಂಧದ ಮರಗಳಿವೆ.  ಮಧ್ಯ ಹಾಗೂ ದಕ್ಷಿಣಭಾಗದ ದ್ವೀಪಗಳಲ್ಲಿ ಮಾನ್‍ಸೂನ್ ಮತ್ತು ಸವನ್ನಾ ಸಸ್ಯವರ್ಗಗಳಿವೆ.  ತೀರಪ್ರದೇಶದಲ್ಲಿ ಮ್ಯಾಂಗ್ರೋವ್ ಜೌಗುಪ್ರದೇಶಗಳಿವೆ.  ಇಲ್ಲಿ ಕಂಡುಬರುವ ಪ್ರಾಣಿಗಳೆಂದರೆ ಕಾಂಗರೂ, ಆ್ಯಂಟ್ ಈಟರ್, ಜಿಂಕೆ, ಇಲಿ, ಬಾವಲಿ, ವಿವಿಧ ಬಗೆಯ ಮೀನುಗಳು ಹಾಗೂ ಪಕ್ಷಿಗಳು.

	ಜನಜೀವನ : ಮೆಲನೇಷ್ಯದ ನಿವಾಸಿಗಳನ್ನು ಓಷನಿಕ್ ನೀಗ್ರೋಯಿಡ್ ಪಂಗಡಕ್ಕೆ ಸೇರಿದವರೆಂದು ಪರಿಗಣಿಸಲಾಗಿದೆ.  ಇವರಲ್ಲಿ ಮೂರು ಮುಖ್ಯ ಪಂಗಡಗಳಿವೆ - ಮೆಲನೇಷ್ಯನ್ನರು, ಪಾಪ್ಯವನ್ನರು, ಮತ್ತು ಪಿಗ್ಮಿಗಳು.  ಕೊನೆಯ ಎರಡು ಪಂಗಡದ ಜನರು ನ್ಯೂಗಿನಿಯಲ್ಲಿ ಮಾತ್ರ ಇದ್ದಾರೆ.  ಹೆಚ್ಚುಮಂದಿ ಕಪ್ಪು ಬಣ್ಣದವರಾದ್ದರಿಂದ ಇವರನ್ನು ನೀಗ್ರೋಗಳೆಂದು ಕೆಲವರು ಪರಿಗಣಿಸುತ್ತಾರೆ.  ಕೆಲವು ಪಂಗಡಗಳಲ್ಲಿ ಆನುವಂಶಿಕತೆಯ ಕಾರಣದಿಂದ ತಿಳಿ ಕಂದುಬಣ್ಣದ ಜನರನ್ನು ನೋಡಬಹುದು.  ಇವರ ತಲೆಗೂದಲು ಗುಂಗುರಾಗಿದೆ.  ದೊಡ್ಡ ದವಡೆ ಹಾಗೂ ಗುದ್ದಲಿಯಾಕಾರದ ಬಾಚಿಹಲ್ಲುಗಳು ಇವರ ಲಕ್ಷಣಗಳು.  ಮೆಲನೇಷ್ಯದಲ್ಲಿ ಅಲ್ಪಸಂಖ್ಯೆಯ ಯೂರೊಪಿಯನ್ನರು, ಪಾಲಿನೇಷ್ಯನ್ನರು, ಚೀನಿಯರು, ವಿಯಟ್ನಾಮಿಯರು, ಅರಬ್ ಮತ್ತು ಯಹೂದಿಗಳು ಇದ್ದಾರೆ.  ಮೆಲನೇಷ್ಯದಲ್ಲಿ 700 ಕ್ಕೂ ಹೆಚ್ಚು ಪ್ರತ್ಯೇಕ ಭಾಷೆಗಳಿವೆ.  ಸಾಲೊಮನ್ಸ್, ನ್ಯೂ ಬ್ರಿಟನ್ ಹಾಗೂ ನ್ಯೂಗಿನಿ ದ್ವೀಪಗಳ ಒಳನಾಡಿನಲ್ಲಿ ಬಳಕೆಯಲ್ಲಿರುವ ಭಾಷೆಗಳಿಗೆ ಪಾಪ್ಯವನ್ ಎಂದು ಕರೆಯಲಾಗುತ್ತದೆ.  ಈ ದ್ವೀಪಗಳ ತೀರ ಪ್ರದೇಶದಲ್ಲಿ ಮತ್ತು ಮೆಲನೇಷ್ಯದ ಉಳಿದ ಎಲ್ಲ ಭಾಗಗಳಲ್ಲಿ ಆಸ್ಟ್ರೋನೇಷ್ಯನ್ ಅಥವಾ ಮಲಯೊ - ಪಾಲಿನೇಷ್ಯನ್ ಮೂಲಕ್ಕೆ ಸೇರಿದ ಭಾಷೆಗಳು ಬಳಕೆಯಲ್ಲಿವೆ.  ಇಲ್ಲಿಯ ದ್ವೀಪಗಳಲ್ಲಿ ಇಂಗ್ಲಿಷನ್ನು ಹೆಚ್ಚು ಬಳಸುತ್ತಾರೆ.  ಸಾಲೊಮನ್ಸ್, ಪಾಪ್ಯವ ನ್ಯೂಗಿನಿ, ಫೀಜಿ ಮತ್ತು ನಾರ್‍ಪೋಕ್ ದ್ವೀಪಗಳ ಆಡಳಿತ ಭಾಷೆ ಇಂಗ್ಲಿಷ್, ನ್ಯೂ ಕುಯಾಲಿಡೋನಿಯದ ಆಡಳಿತ ಭಾಷೆ ಫ್ರೆಂಚ್, ವನುವಾಟು ಮತ್ತು ಬಿಸ್ಲಾಮಾಗಳಲ್ಲಿ ಫ್ರೆಂಚ್ ಹಾಗೂ ಇಂಗ್ಲಿಷ್ ಆಡಳಿತಭಾಷೆಗಳು.  ಅಮೆರಿಕದ ನ್ಯಾಸ ಪ್ರದೇಶಗಳ ದ್ವೀಪಗಳಲ್ಲಿ ಜಪಾನೀ ಭಾಷೆಯನ್ನು ಆಡುತ್ತಾರೆ.  ಈ ದ್ವೀಪಗಳು 1920 ರಿಂದ 45ರ ತನಕ ಜಪಾನಿನ ಸ್ವಾಧೀನದಲ್ಲಿದ್ದುದೇ ಇದಕ್ಕೆ ಕಾರಣ.

	ಫೀಜಿ ಬಿಟ್ಟು ಮೆಲನೇಷ್ಯದ ಉಳಿದ ದ್ವೀಪಗಳಲ್ಲಿ ಪಿಡ್ಜಿನ್ ಇಂಗ್ಲಿಷ್ ಅಥವಾ ನಿಯೋ ಮೆಲನೇಷ್ಯನ್ ಎಂಬ ಭಾಷೆ ಬಳಕೆಯಲ್ಲಿದೆ.  ಇದರಲ್ಲಿ ಇಂಗ್ಲಿಷ್ ಹಾಗೂ ಇತರ ಸ್ಥಳೀಯ ಭಾಷೆಗಳ ಪದಗಳಿವೆ.  ನೂರಾರು ಭಾಷೆಗಳನ್ನಾಡುವ ಜನರಿರುವ ಮೆಲನೇಷ್ಯದಲ್ಲಿ ಪಿಡ್ಜಿನ್ ಇಂಗ್ಲಿಷ್ ಸಂಪರ್ಕ ಭಾಷೆಯಾಗಿದೆ.

	19 ನೆಯ ಶತಮಾನದಿಂದೀಚೆಗೆ ಕ್ರೈಸ್ತಮತ ಇಲ್ಲಿಯ ಪ್ರಮುಖ ಧರ್ಮವಾಗಿದೆ.  ಇದಕ್ಕೆ ಮೊದಲು ಇಲ್ಲಿ ಬೇರೆ ಬೇರೆ ದೇವರುಗಳನ್ನು ನಂಬುವ ಜಟಿಲವಾದ ಪುರಾಣಗಳಿರುವ ಅನೇಕ ಮತಧರ್ಮಗಳಿದ್ದವು.  ಇಲ್ಲಿ ಹಿಂದೆ ನರಮಾಂಸಭಕ್ಷಣೆ ಅಸ್ತಿತ್ವದಲ್ಲಿತ್ತು.  ಈಗಲೂ ನ್ಯೂಗಿನಿಯಲ್ಲಿ ಮಾತ್ರ ಅಪರೂಪವಾಗಿ ನರಮಾಂಸಭಕ್ಷನೆ ಉಂಟೆಂದು ಹೇಳುವರು.  ಮೆಲನೇಷ್ಯದ ಕೆಲವು ಭಾಗಗಳಲ್ಲಿ ಕಾರ್ಗೋ ಎಂಬ ಮತಧರ್ಮ ಅಸ್ತಿತ್ವದಲ್ಲಿತ್ತು.  ಪಾಶ್ಚಿಮಾತ್ಯರ ಜೀವನದೊಡನೆ ಹೋಲಿಸಿಕೊಂಡ ಕೆಲವರು ತಮ್ಮ ಜೀವನಮಟ್ಟದ ಬಗ್ಗೆ ಅತೃಪ್ತಿಪಟ್ಟರು.  ಅವರ ಅತೃಪ್ತಿಯೇ ಈ ಧರ್ಮದ ಉಗಮಕ್ಕೆ ಮೂಲಕಾರಣವೆನ್ನುವರು.  ಈ ಧರ್ಮವನ್ನು ನಂಬುವ ಪಾಶ್ಚಿಮಾತ್ಯರು ತಾವು ಅನುಭವಿಸುತ್ತಿರುವ ಭೋಗವಸ್ತುಗಳಲ್ಲಿ ತಮಗೂ ಒಂದು ಪಾಲಿದೆಯೆಂದು ಈ ಭೋಗವಸ್ತುಗಳು ತುಂಬಿರುವ ದೊಡ್ಡ ಹಡಗುಗಳು ಅಥವಾ ವಿಮಾನಗಳು ಒಂದು ದಿನ ಇಲ್ಲಿಗೆ ಬಂದು ತಮ್ಮ ದಾರಿದ್ರ್ಯ ನೀಗುತ್ತವೆಂಬ ಮಿಥ್ಯಾ ನಂಬಿಕೆಯುಳ್ಳವರು.

	ಮೆಲನೇಷ್ಯದಲ್ಲಿ ಬಹುಪಾಲು ಪಂಗಡಗಳು ಸಣ್ಣ ಪ್ರಮಾಣದವು.  ಇವು ಒಂದೇ ಆನುವಂಶಿಕತೆಯ ಆಧಾರದ ಮೇಲೆ ರೂಪಿತವಾಗಿವೆ. ಬಹುಪಾಲು ಹಳ್ಳಿಗಳು ಸ್ವತಂತ್ರವಾಗಿವೆ.  ಕೆಲವು ಪಂಗಡಗಳ ಮುಖಂಡತ್ವ ವಂಶಪಾರಂಪರ್ಯವಾಗಿ ಬರುವುದು.  ಉಳಿದವುಗಳಲ್ಲಿ ಪಂಗಡದ ಶಕ್ತಿಶಾಲಿ ವ್ಯಕ್ತಿ ನಾಯಕನಾಗುತ್ತಾನೆ.

	ಯೂರೋಪಿಯನ್ನರ ಸಂಬಂಧ ಇಲ್ಲಿಯ ಅನೇಕ ಪಂಗಡಗಳಿಗೆ  ವಿನಾಶಕಾರಿಯಾಗಿ ಪರಿಣಮಿಸಿತು.  ಬಂದೂಕುಗಳು, ಹೊಸ ರೋಗಗಳು, ಬಲಾತ್ಕಾರದ ಜೀತಪದ್ಧತಿ ಇವುಗಳಿಂದ ಅನೇಕ ಪಂಗಡಗಳು ನಾಶವಾಗುವ ಸ್ಥಿತಿಗೆ ಬಂದವು.  ಇಷ್ಟರಲ್ಲಿ ಜವಾಬ್ಧಾರಿಯುತ ಯುರೋಪಿಯನ್ ಸರ್ಕಾರಗಳು ತಮ್ಮ ಜನರು ಮಾಡುತ್ತಿದ್ದ ದುರುಪಯೋಗವನ್ನು ನಿಲ್ಲಿಸಿ ವೈದ್ಯಕೀಯ ಹಾಗೂ ವಿದ್ಯಾಭ್ಯಾಸದ ಸೌಲಭ್ಯಗಳನ್ನು ಸ್ಥಳೀಯರಿಗೆ ಕಲ್ಪಿಸಿದವು.  ಆರ್ಥಿಕ ಅಭಿವೃದ್ಧಿ ಹಾಗೂ ಪಂಗಡಗಳ ನಡುವೆ ಪರಸ್ಪರ ಯುದ್ಧ ನಿಲುಗಡೆಯಿಂದ ಸೌಹಾರ್ದಯುತ ಸಂಬಂಧ ಬೆಲೆಯಿತು.   ಯೂರೋಪಿಯನ್ನರ ಸಂಪರ್ಕದಿಂದ ಹೊಸ ಆರ್ಥಿಕ ಆವಶ್ಯಕತೆಗಳು ಮತ್ತು ಧಾರ್ಮಿಕ ನಂಬಿಕೆಗಳು ಪ್ರಚಾರವಾದವು.  ಇವು ಸಿಗದೆ ಆಶಾಭಂಗವಾದ ಮೆಲನೇಷ್ಯನ್ನರು ಹೊಸ ಧಾರ್ಮಿಕ ಪಂಗಡಗಳನ್ನು ಪ್ರಾರಂಭಿಸಿದರು.  ಕಾರ್ಗೋ ಕಲ್ಟ್ ಎಂಬುದು ಇದರಲ್ಲಿ ಒಂದು.  ಎರಡನೆಯ ಮಹಾಯುದ್ಧದ ಅನಂತರ ಜನರ ಅತೃಪ್ತಿ ಇನ್ನೂ ಹೆಚ್ಚಾಗಿ ಕಾರ್ಗೋ ಕಲ್ಟ್ ಮೆಲನೇಷ್ಯದ ಎಲ್ಲ ಭಾಗಗಳಲ್ಲೂ ಹರಡಿತು.  ರಾಜಕೀಯ ಹಾಗೂ ಆರ್ಥಿಕ ಸ್ವಯಂಭಿವೃದ್ಧಿಯ ಉದ್ದೇಶ ಹೊಂದಿದ ಅನೇಕ ಮತಪದ್ಧತಿಗಳು ಪ್ರಾರಂಭವಾದವು.  ಇವುಗಳಲ್ಲಿ ಅಡ್ಮಿರಾಲಿಟಿ ದ್ವೀಪಗಳಲ್ಲಿಯ ಪಲಿಯೊ ಚಳವಳಿ ಹಾಗೂ ಸಾಲೊಮನ್ ದ್ವೀಪಗಳಲ್ಲಿಯ ಮಾರ್ಚಿಂಗ್ ರೂಲ್ ಚಳವಳಿ ಸೇರಿದೆ.  ಈ ಹೊಸ ಮತಪದ್ಧತಿಗಳು ಅನೇಕ ವೇಳೆ ಯೂರೋಪಿಯನ್ ಅಧಿಕಾರಶಾಹಿಗೆ ವಿರೋಧವಾಗಿ ರಾಜಕೀಯ ಬಿಕ್ಕಟ್ಟಿಗೆ ಕಾರಣವಾದವು.

	ಮೆಲನೇಷ್ಯದ ಒಟ್ಟು ಜನಸಂಖ್ಯೆಯಲ್ಲಿ ಶೇ.  75 ರಷ್ಟು ಜನ ಪಾಪ್ಯವ ನ್ಯೂಗಿನಿ ಒಂದರಲ್ಲೇ ವಾಸಿಸುತ್ತಾರೆ.  ಶೇ. 15 ರಷ್ಟು ಜನ ಫೀಜಿಯಲ್ಲಿಯೂ ಶೇ. 6 ರಷ್ಟು ಸಾಲೊಮನ್ ದ್ವೀಪಗಳಲ್ಲೂ ಶೇ. 3 ರಷ್ಟು ನ್ಯೂ ಕ್ಯಾಲಿಡೋನಿಯ ಮತ್ತು ವನುವಾಟು ದ್ವೀಪದಲ್ಲೂ ವಾಸಿಸುತ್ತಾರೆ.  ಜನಸಂಖ್ಯೆಯ ಬೆಳವಣಿಗೆಯ ಪ್ರಮಾಣ ಇಲ್ಲಿ ಹೆಚ್ಚು.  ಹೀಗಾಗಿ ಮೆಲನೇಷ್ಯದ ಜನಸಂಖ್ಯೆಯ 2/5 ರಷ್ಟು ಜನ 15 ವರ್ಷಗಳಿಗಿಂತ ಕಡಿಮೆ ವಯಸ್ಸಿನವರು.  ನಗರವಾಸಿಗಳ ಒಟ್ಟು ಜನ ಸಂಖ್ಯೆ 1/5 ಭಾಗಕ್ಕೂ ಕಡಿಮೆ.

	ಆಡಳಿತ : ಫೀಜಿ, ಪಾಪ್ಯವ ನ್ಯೂಗಿನಿ, ಸಾಲೊಮನ್ ದ್ವೀಪಗಳು ಮತ್ತು ವನುವಾಟು ಕಾಮನ್ವೆಲ್ತ್ ಸಮುದಾಯದಲ್ಲಿ ಸ್ವತಂತ್ರ ರಾಜ್ಯಗಳು.  ಇವುಗಳಲ್ಲಿ ಪಾರ್ಲಿಮೆಂಟರಿ ಪದ್ಧತಿಯ ಸರ್ಕಾರಗಳಿವೆ.  ನ್ಯೂ ಕ್ಯಾಲಿಡೋನಿಯ ಫ್ರೆಂಚ್ ಸಾಗರೋತ್ತರ ಪ್ರದೇಶ.  ನಾರ್ಫೋಕ್ ದ್ವೀಪ ಆಸ್ಟ್ರೇಲಿಯಕ್ಕೆ ಸೇರಿದೆ.  ಮೆಲನೇಷ್ಯದ ನ್ಯಾಯಾಂಗ ಪದ್ಧತಿ ಬ್ರಿಟಿಷ್ ಅಥವಾ ಫ್ರೆಂಚ್ ಮಾದರಿಯಲ್ಲಿದೆ.

	ಮೆಲನೇಷ್ಯದಲ್ಲಿ ಸಾಮಾಜಿಕ ಭದ್ರತಾ ಕಾರ್ಯಕ್ರಮಗಳು ಸಾಕಷ್ಟಿಲ್ಲದಿದ್ದರೂ ಉಚಿತ ಅಥವಾ ಕಡಿಮೆ ಬೆಲೆಗೆ ವೈದ್ಯಕೀಯ ಸಹಾಯ ದೊರೆಯುತ್ತದೆ.  ದೊಡ್ಡ ದ್ವೀಪಗಳಲ್ಲಿ ಆಸ್ಪತ್ರೆಗಳಿವೆ.  ಉಳಿದ ಸಣ್ಣ ದ್ವೀಪಗಳಲ್ಲಿ ಔಷಧಾಲಯಗಳಿದ್ದರೂ ಇಲ್ಲಿ ವೈದ್ಯಕೀಯ ಸಿಬ್ಬಂದಿಯ ಕೊರತೆಯಿದೆ.

	ಆರ್ಥಿಕತೆ : ಇಲ್ಲಿಯ ಜನರ ಮುಖ್ಯ ಕಸಬು ಕೃಷಿ ಹಾಗೂ ಮೀನುಗಾರಿಕೆ.  ಬ್ರೆಡ್‍ಫ್ಯೂಟ್ ಟಾರೋ (ಕೆಸವು, ಗೆಣಸು, ಕಬ್ಬು, ತಾಳೆ, ಬಾಳೆಹಣ್ಣು, ರಬ್ಬರ್, ಕೋಕೋ, ತರಕಾರಿಗಳು, ಹೊಗೆಸೊಪ್ಪು ಇಲ್ಲಿ ವಿಶೇಷವಾಗಿ ಬೆಲೆಯಲಾಗುತ್ತದೆ.  ಫೀಜಿ ಮತ್ತು ನ್ಯೂ ಹೆಬ್ರಡೀಸ್ ದ್ವೀಪಗಳಲ್ಲಿ ಕಾವಾ ಎಂಬ ಪಾನೀಯ ತಯಾರಿಸುವರು.  ಇಲ್ಲಿ ಕೃಷಿ ಭೂಮಿಯ ಒಡೆತನ ಒಟ್ಟು ಸಮುದಾಯಕ್ಕೆ ಸೇರಿದೆ.  ವೈಯಕ್ತಿಕ ಒಡೆತನವಿಲ್ಲ.  ಪಶುಪಾಲನೆ ಸಹ ಸಾಮುದಾಯಿಕವಾಗಿ ನಡೆಸಲಾಗುತ್ತಿದೆ.  ಹಂದಿ, ನಾಯಿ, ಮತ್ತು ಕೋಳಿ ಇಲ್ಲಿಯ ಸಾಕುಪ್ರಾಣಿಗಳು.  ನ್ಯೂಕ್ಯಾಲಿಡೋನಿಯ, ನ್ಯೂಗಿನಿ ಹಾಗೂ ಫೀಜಿಗಳಲ್ಲಿ  ಗಣಿ ಉದ್ಯಮ ಪ್ರಮುಖವಾಗಿದೆ.  ನಿಕ್ಕಲ್ ಉತ್ಪಾದನೆಯಲ್ಲಿ ವಿಶ್ವದಲ್ಲಿಯೇ ಅತ್ಯಂತ ಪ್ರಮುಖ ರಾಷ್ಟ್ರಗಳಲ್ಲಿ ನ್ಯೂಕ್ಯಾಲಿಡೋನಿಯ ಒಂದು.  ಪಾಪ್ಯವ ನ್ಯೂಗಿನಿಯಲ್ಲಿ ತಾಮ್ರ, ಬೆಳ್ಳಿ ಮತ್ತು ಚಿನ್ನ ಸಿಗುತ್ತದೆ.

	ಇತಿಹಾಸ :  ಪಶ್ಚಿಮ ಮೆಲನೇಷ್ಯದಲ್ಲಿ 30,000 ವರ್ಷಗಳಿಗೂ ಹಿಂದಿನಿಂದ ಪಾಪ್ಯವನ್ ಜನ ನೆಲೆಸಿದ್ದಾರೆಂದು ಹೇಳಲಾಗಿದೆ.  ಆಸ್ಟ್ರೋನೇಷ್ಯನ್ ಮಾತನಾಡುವ ಜನ ಸುಮಾರು 5,000 ವರ್ಷಗಳ ಹಿಂದೆ ಈ ಪ್ರದೇಶವನ್ನು ಪ್ರವೇಶಿಸಿದರೆಂದೂ 50,000 ವರ್ಷಗಳಿಗೂ ಹಿಂದೆ ನ್ಯೂಗಿನಿಯ ಮೂಲಕ ಮಾನವರು ಆಸ್ಟ್ರೇಲಿಯವನ್ನು ಪ್ರವೇಶಿಸಿದರೆಂದೂ ಕೆಲವು ತಜ್ಞರ ಅಭಿಪ್ರಾಯ.

	ಇಲ್ಲಿಗೆ ಬಂದ ಯೂರೋಪಿಯನ್ನರಲ್ಲಿ ಮೊದಲನೆಯವನು 1567 ರಲ್ಲಿ ಸಾಲೊಮನ್ ದ್ವೀಪವನ್ನು ಸೇರಿದ ಸ್ಪೇನ್ ದೇಶೀಯ  ಆಲ್ವಾರೋ ಡಿ ಮಜೆಂಡಾನಾ.  1606ರಲ್ಲಿ ಸ್ಪೇನಿನವರಾದ ಫರ್ನಾಂಡಿಸ್ ಡಿ ಕ್ವಿರೋಸ್ ಎಂಬಾತ ನ್ಯೂ ಹೆಬ್ರಡೀಸ್ ದ್ವೀಪವನ್ನೂ ವಾಜ್ ಡಿ ಟೋರೆಸ್ ಎಂಬಾತ ಆಗ್ನೇಯ ನ್ಯೂಗಿನಿಯನ್ನು ಕಂಡುಹಿಡಿದರು.  ಡಚ್ಚನಾದ   ಜಾಸ್ವಿಸ್ ಲಿ ಮೆರೆ ಎಂಬಾತ ಬಿಸ್ಮಾರ್ಕ್ ದ್ವೀಪಸ್ತೋಮ, ನ್ಯೂ ಐರ್ಲೆಂಡ್ ಮತ್ತು ಹನೋವರ್ ದ್ವೀಪಗಳಿಗೆ ಬಂದ (1615 - 16 ).  ಅಬೆಲ್‍ಜಾನ್‍ಸೂನ್ ಟಾಸ್ಮಾನ್ ಎಂಬಾತ 1642 ರಲ್ಲಿ ಫೀಜಿ ಹಾಗೂ ನ್ಯೂಬ್ರಿಟಿಷ್ ತಲಪಿದ.  18 ನೆಯ ಶತಮಾನದ ಮೊದಲ ಭಾಗದಲ್ಲಿ ಬ್ರಿಟಿಷರ ಪರಿಶೋಧನೆ ಇಲ್ಲಿ ಪ್ರಾರಂಭವಾಯಿತು.  ಬ್ರಿಟಿಷ್ ನಾವಿಕ ಕ್ಯಾಪ್ಟನ್ ಜೇಮ್ಸ್ ಕುಕ್ ಫೀಜಿ, ನ್ಯೂ ಕ್ಯಾಲಿಡೋನಿಯ, ನ್ಯೂ ಹೆಬ್ರಡೀಸ್ ಮತ್ತು ನಾರ್ಫೋಕ್ ದ್ವೀಪಗಳನ್ನು 1772 - 75 ರಲ್ಲಿ ಫೆಸಿಫಿಕ್ ಸಾಗರದ  ತನ್ನ ದ್ವೀತಿಯ ಕಡಲ ಯಾನದಲ್ಲಿ ಪರಿಶೋಧಿಸಿದ.  ಇಲ್ಲಿ ಬಂದು ನೆಲೆಸಿದವರಲ್ಲಿ 19ನೆಯ ಶತಮಾನದಲ್ಲಿ ಬಂದ ಮಿಷನರಿಗಳೇ ಮೊದಲನೆಯವರು.

	1828 ರಲ್ಲಿ ಪಶ್ಚಿಮ ನ್ಯೂಗಿನಿಯನ್ನು ಡಚ್ಚರು , 1853 ರಲ್ಲಿ ನ್ಯೂ ಕ್ಯಾಲಿಡೋನಿಯವನ್ನು ಫ್ರೆಂಚರು, 1874 ರಲ್ಲಿ ಫೀಜಿ ಹಾಗೂ 1888 ರಲ್ಲಿ ನ್ಯೂಗಿನಿಯ ಆಗ್ನೇಯ ಭಾಗವನ್ನು ಬ್ರಿಟಿಷರು ಸ್ವಾಧೀನಪಡಿಸಿಕೊಂಡರು.  ಜರ್ಮನರು ಈಶಾನ್ಯ ನ್ಯೂಗಿನಿ ಮತ್ತು ಸಾಲೊಮನ್ ದ್ವೀಪಗಳ ಸ್ವಲ್ಪ ಭಾಗವನ್ನು 1884 ರಲ್ಲಿ ವಶಪಡಿಸಿಕೊಂಡರು.  ಸಾಲೊಮನ್ ದ್ವೀಪಗಳ ಉಳಿದ ಭಾಗದಲ್ಲಿ ಬ್ರಿಟನ್ 1893 ರಲ್ಲಿ ರಕ್ಷಣಾಧಿಕಾರವನ್ನು ಸ್ಥಾಪಿಸಿತು.  ನ್ಯೂ ಹೆಬ್ರಡೀಸ್ ಸ್ವಾಮ್ಯಕ್ಕಾಗಿ ಇಂಗ್ಲಿಷರ ಮತ್ತು ಫ್ರೆಂಚರ ನಡುವೆ ಪೈಪೋಟಿಯಾಗಿ 1906 ರಲ್ಲಿ ಇಬ್ಬರೂ ಪ್ರಭುತ್ವ ಸ್ಥಾಪಿಸಿದರು.  ಆಸ್ಟ್ರೇಲಿಯನ್ನರು 1909 ರಲ್ಲಿ ಬ್ರಿಟಿಷ್ ಅಧೀನದ ನ್ಯೂಗಿನಿಯಲ್ಲಿ ಆಡಳಿತ ನಡೆಸಲು ಪ್ರಾರಂಭಿಸಿ, 1914 ರಲ್ಲಿ ಜರ್ಮನರ ಅಧೀನದಲ್ಲಿದ್ದ ನ್ಯೂಗಿನಿಯ ಭಾಗವನ್ನು ತಮ್ಮ ವಶಕ್ಕೆ ತೆಗೆದುಕೊಂಡರು.  ಪಶ್ಚಿಮ ನ್ಯೂಗಿನಿ 1969 ರಲ್ಲಿ ಇಂಡೀನೇಷ್ಯದ ಪ್ರಾಂತ್ಯವಾಯಿತು.  1975 ರಲ್ಲಿ ನ್ಯೂಗಿನಿಯ ಪೂರ್ವ ಭಾಗ ಸ್ವತಂತ್ರವಾಗಿ ಪಾಪ್ಯವ ನ್ಯೂಗಿನಿ ಎಂಬ ಹೆಸರು ಪಡೆಯಿತು.  1978 ರಲ್ಲಿ ಸಾಲೊಮನ್ ದ್ವೀಪಗಳು ಸ್ವತಂತ್ರವಾದವು.
(ಜೆ.ಎಸ್.ಎಸ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ